ಕುಮರ ಗುರುಪರನ್

17ನೆಯ ಶತಮಾನದ ಮೊದಲ ಭಾಗದಲ್ಲಿ ಬಾಳಿದ ತಮಿಳು ಪಂಡಿತ. ತಮಿಳು ನಾಡಿನ ದಕ್ಷಿಣ ಭಾಗದ ತಿರುನೆಲ್ವೇಲಿಯಲ್ಲಿ ಜನಿಸಿದ. ಈತ ಶೈವ ವೇಳಾಳ ಕುಲಕ್ಕೆ ಸೇರಿದವ, ತಂದೆ ಷಣ್ಮುಗ ಶಿಖಾಮಣಿ; ತಾಯಿ ಶಿವಗಾಮಸುಂದರಿ. ಹುಟ್ಟಿ ಐದು ವರ್ಷವಾದರೂ ಈತನಿಗೆ ಮಾತು ಬರುತ್ತಿರಲಿಲ್ಲ. ಆದುದರಿಂದ ಸಮೀಪದಲ್ಲಿದ್ದ ತಿರುಚೆಂದೂರಿನ ದೇವಾಯಲಕ್ಕೆ ಕರೆದುಕೊಂಡು ಹೋದರು. ಅಲ್ಲಿಯ ಸುಬ್ರಹ್ಮಣ್ಯಸ್ವಾಮಿಯ ದಯದಿಂದ ಈತನಿಗೆ ಮಾತು ಬಂತು. ಈ ಬಗ್ಗೆ ಈತ ಕಂದರ್ ಕಲಿವೆಣ್ಬಾ ಎಂಬ ಗ್ರಂಥವನ್ನು ರಚಿಸಿದ್ದಾನೆ.

 ತಮಿಳು ವ್ಯಾಕರಣ ಹಾಗೂ ಸಾಹಿತ್ಯಾಭ್ಯಾಸವನ್ನು ಈತ ಮುಂದುವರಿಸಿದ. ಭಕ್ತಿ, ಜ್ಞಾನ, ವೈರಾಗ್ಯವಶನಾಗಿ ಹಲವು ಶಿವಕ್ಷೇತ್ರಗಳನ್ನು ಸಂದರ್ಶಿಸಿದ. ಮಧುರೆಗೆ ಹೋದಾಗ ಅಲ್ಲಿ ಮೀನಾಕ್ಷಿಯಮ್ಮೈ ಪಿಳ್ಳೈ ತಮಿಳ್ ಎಂಬ ಗ್ರಂಥವನ್ನು ರಚಿಸಿ ಅದನ್ನು ಮಧುರೈ ಮೀನಾಕ್ಷಿ ದೇವಾಲಯದಲ್ಲಿ ನೆರೆದ ವಿದ್ವತ್ಸಭೆಯ ಮುಂದೆ ಓದಿದ. ಆಗ ಮೀನಾಕ್ಷಿ ದೇವಿಯೇ ಹೆಣ್ಣುಮಗುವಿನ ರೂಪನ್ನಾಂತು ಬಂದು ಆ ಕಾವ್ಯವನ್ನು ಕೇಳಿ, ಸಂತೋಷಗೊಂಡು, ಮುತ್ತುಮಾಲೆಯೊಂದನ್ನು ಕುಮರ ಗುರುಪರನಿಗೆ ಮೆಚ್ಚುಗೊಟ್ಟಳೆಂಬುದೊಂದು ಕಥೆಯಿದೆ. ಮತ್ತೆ ಮೀನಾಕ್ಷಿ ಅಮ್ಮೈಕುರಂ, ಇರಟ್ಟೈ ಮಣಿಮಾಲೈ, ಮದುರೈ ಕಲಂಬಗಂ, ನೀದಿ ನೆರಿವಿಳಕ್ಕಂ-ಮುಂತಾದ ಗ್ರಂಥಗಳನ್ನೀತ ರಚಿಸಿದ ಅಮೇಲೆ ಹಲವು ಊರುಗಳಿಗೆ ಹೋಗಿ ಹಲವು ಗ್ರಂಥಗಳನ್ನು ಬರೆದನಾದರೂ ತನಗೊಬ್ಬ ಗುರು ಬೇಕೆಂಬ ಹಂಬಲ ಈತನಲ್ಲಿ ಬೆಳೆಯಿತು. ಧರ್ಮಪುರಾಧೀನವೆಂಬ ಮಠದಲ್ಲಿ ಗುರುಮೂರ್ತಿಯಾಗಿದ್ದ ಶ್ರೀ ಮಾಸಿಲಾಮಣಿ ದೇಶಿಕರನ್ನು ತನಗೆ ಸಂನ್ಯಾಸದೀಕ್ಷೆ ನೀಡಬೇಕೆಂದು ಪ್ರಾರ್ಥಿಸಿದ. ದೇಶಿಕರೂ ಅದಕ್ಕೆ ಒಪ್ಪಿಕೊಂಡು, ಚಿದಂಬರಂ ವರೆಗೆ ಹೋಗಿಬರಬೇಕೆಂದು ಇವನಿಗೆ ಅಪ್ಪಣೆ ಮಾಡಿದರು. ಅದಕ್ಕೊಪ್ಪಿದ ಈತ ಬರುತ್ತ ದಾರಿಯಲ್ಲಿದ್ದ ವೈದೀಶ್ವರನ್ ಆಲಯಕ್ಕೆ ಹೋಗಿ, ಅಲ್ಲಿ ಮುತ್ತುಕುಮಾರಸ್ವಾಮಿ ಪಿಳ್ಳೆ ತಮಿಳ್ ಎಂಬ ಗ್ರಂಥವನ್ನು ರಚಿಸಿ, ಮತ್ತೆ ಚಿದಂಬರಂಗೆ ಬಂದು ಅಲ್ಲಿ ಕೆಲವು ಕಾಲ ನೆಲೆಸಿದ. ಆ ಸಮಯದಲ್ಲಿಯೇ ಚಿದಂಬರಂ ಮುಮ್ಮಣಿಕೋವೈ, ಚಿದಂಬರಂ ಶೆಯ್ಯುಳ್ ಕೋವೈ ಎಂಬೆರಡು ಗ್ರಂಥಗಳನ್ನು ರಚಿಸಿದ. ಮತ್ತೆ ಧರ್ಮಪುರಕ್ಕೆ ಹೋಗಿ ದೇಶಿಕರಿಂದ ಕಾಷಾಯವಸ್ತ್ರವನ್ನು ಸ್ವೀಕರಿಸಿದ. ಗುರುಗಳ ಪರವಾಗಿ ಪಂಡಾರಮುಮ್ಮಣಿಕೋವೈ ಎಂಬ ಕೃತಿಯನ್ನು ರಚಿಸಿದ.

 ಅನಂತರ ಹಲವು ಶಿವಕ್ಷೇತ್ರಗಳನ್ನು ಸಂದರ್ಶಿಸಿ, ಕೊನೆಯಲ್ಲಿ ಕಾಶಿಗೆ ಹೋಗಿ ಕಾಶಿಕಲಂಬಗಂ ಎಂಬುದನ್ನು ರಚಿಸಿದ. ಹಿಂದೀ ಭಾಷೆಯನ್ನು ಕಲಿತುಕೊಳ್ಳಬೇಕೆಂದು ನೆನೆಸಿ ಸರಸ್ವತಿಯನ್ನು ಸ್ತುತಿಸಿ, ಸಕಲಕಲಾವಲ್ಲಿ ಮಾಲೈ ಎಂಬ ಹತ್ತು ಹಾಡುಗಳನ್ನು ಹಾಡಿ. ಹಿಂದೀ ಭಾಷೆಯ ತಿಳಿವಳಿಕೆ ಪಡೆದ. ಅಲ್ಲಿಯ ಅರಸನೊಡನೆ ಹಿಂದಿಯಲ್ಲಿ ಮಾತನಾಡಿ ಸಂತೋಷಪಡಿಸಿ, ಅಲ್ಲಿ ನೆಲೆಸಲು ಯೋಗ್ಯವಾದ ಮಠವನ್ನು ಕಟ್ಟಲು ಬೇಕಾದ ಸ್ಧಳವನ್ನು ಪಡೆದ. ತಾನು ಬಾಳಿದ ಕುಮಾರಸ್ವಾಮಿ ಮಠದಲ್ಲಿಯೇ ಪುರಾಣಶಾಲೆಯೊಂದನ್ನು ಏರ್ಷಡಿಸಿ. ಹಿಂದಿಯಲ್ಲಿಯೂ ತಮಿಳಿನಲ್ಲಿಯೂ ಪುರಾಣ ಪ್ರವಚನ ಮಾಡಿದ. ಶ್ರೇಷ್ಠ ಕವಿಯಾದ ತುಳಸಿದಾಸ ಈತನ ರಾಮಾಯಣ ಪ್ರಸಂಗವನ್ನು ಕೇಳಿದರೆಂದೂ ಅದರಿಂದಾಗಿಯೇ ಕಂಬರಾಮಾಯಣದಲ್ಲಿ ಕಂಡು ಬರುವ ಕೆಲವು ಸಂದರ್ಭಗಳು ತುಳಸಿರಾಮಾಯಣದಲ್ಲಿಯೂ ಕಂಡುಬರುತ್ತವೆಂದೂ ಹೇಳುತ್ತಾರೆ. ಈತ ಕಾಶಿಗೆ ಹೋದ ಅನಂತರ ತಮಿಳುನಾಡಿಗೆ ಒಮ್ಮೆ ಬಂದಿದ್ದು ಮತ್ತೆ ಕಾಶಿಗೆ ಹೋಗಿ ಅಲ್ಲಿಯೇ ನೆಲಸಿ ಅಲ್ಲಿಯೇ ಕಾಲವಾದನೆನ್ನಲಾಗಿದೆ.

 ಈತ ಬರೆದ 13 ಗ್ರಂಥಗಳು ಉಪಲದ್ಧವಿವೆ. ಇನ್ನೂ ಮೂರು ಗ್ರಂಥಗಳು ಈತನ ಹೆಸರಲ್ಲಿವೆ. ಇವನ್ನು ಸ್ವಾಮಿನಾಥ ಅಯ್ಯರ್ ಸಂಪಾದಿಸಿದ್ದಾರೆ.

 ಸುಮಾರು ಮೂವತ್ತು ವರ್ಷಗಳ ಹಿಂದೆ ತಮಿಳಿನಲ್ಲಿ ಪಾಂಡಿತ್ಯ ಗಳಿಸಲು ಬಯಸುವಂಥವರು ಸಣ್ಣ ಗ್ರಂಥಗಳನ್ನು ಓದುವ ರೂಢಿಯಿತ್ತು. ಅವುಗಳಲ್ಲಿ ಕುಮರಗುರುಪರನ ಮೀನಾಕ್ಷಿಯಮ್ಮೈ ಪಿಳ್ಳೈ ತಮಿಳ್, ಮದುರೆ ಕಲಂಬಗಂ ಎಂಬೆರಡು ಹೊತ್ತಗೆಗಳು ಸೇರಿದ್ದುವು. ಈತನ ನೀದಿ ನೆರಿ ವಿಳಕ್ಕಂ ಎಂಬುದು ಶಾಲಾ Áಲಕರಿಗೆ ಪಠ್ಯಪುಸ್ತಕವಾಗಿದ್ದುದೂ ಉಂಟು. ಸುಬ್ರಹ್ಮಣ್ಯ ಸ್ವಾಮಿಯ ಭಕ್ತರು ಕಂದರ್ ಕಲಿವೆಣ್ಬಾ, ಮುತ್ತುಕುಮಾರಸ್ವಾಮಿ ಪಿಳ್ಳೆ ತಮಿಳ್ ಎಂಬುವುಗಳನ್ನು ಪಾರಾಯಣ ಮಾಡುತ್ತಾರೆ.

 ಈತನ ಗ್ರಂಥಗಳಲ್ಲಿ ತಮಿಳು ಪಾಂಡಿತ್ಯ ಹೊರಹೊಮ್ಮುತ್ತದೆ. ಕೃತಿಗಳಲ್ಲಿ ಅತಿಶಯೋಕ್ತಿಗಳು ತುಂಬಿವೆ. `ಮಾಣಿಕ್ಯವೆಂಬ ಬೆಂಕಿಯನ್ನು ಒಲೆಯಲ್ಲಿಟ್ಟು, ಹವಳದ ಸೌದೆಯನ್ನು ಒಟ್ಟಿ, ಶಂಖದ ಪಾತ್ರೆಯಲ್ಲಿ ಜೇನಿನ ಎಸರಿಕ್ಕಿ, ಮುತ್ತೆಂಬ ಅಕ್ಕಿಯನ್ನು ಹಾಕಿ, ಅನ್ನ ಮಾಡುತ್ತಾರೆ'-ಎಂದು ಮಕ್ಕಳ ಅಡುಗೆಯ ಆಟವನ್ನೀತ ಬಣ್ಣಿಸಿದ್ದಾನೆ. ಶೃಂಗಾರವನ್ನೂ ಶೈವಸಿದ್ಧಾಂತ ವಿಷಯಗಳನ್ನೂ ಜತೆಗೂಡಿಸಿ ಹಾಡಿರುವುದು ಗಮನಿಸತಕ್ಕ ವಿಷಯ. ಜ್ಞಾನಗುರುವೇ ಪ್ರಿಯನೆಂದೂ ಶಿಷ್ಯ ಪ್ರೇಯಸಿಯೆಂದೂ ಈತನ ಕಲ್ಪನೆ.

 ತಮಿಳು ಭಾಷೆಯ ಮೇಲೆ ಈ ಕವಿಗೆ ಅಗಾಧಪ್ರೇಮ. ಹಾಗಾಗಿ ತಮಿಳಿಗೆ ದೈವತಮಿಳ್, ತೇನ್‍ತಮಿಳ್, ಪಸುಂದಮೀಳ್, ಎಂದಿತ್ಯಾದಿ 30ಕ್ಕೂ ಮೇಲ್ಪಟ್ಟು ವಿಶೇಷಣಗಳನ್ನು ಈತ ಕೊಟ್ಟಿದ್ದಾನೆ. ಅಂತೆಯೇ ತನ್ನ ಕೃತಿಗಳಲ್ಲಿ ಸಂಸ್ಕøತಕ್ಕೂ ಈತ ಸಾಕಷ್ಟು ಗೌರವ ಕೊಟ್ಟಿದ್ದಾನೆ; ವೇದಗಳ ಪ್ರಾಚೀನತೆಯನ್ನೂ ದೈವಿಕ ಪರಂಪರೆಯನ್ನೂ ಹೊಗಳಿದ್ದಾನೆ. ಸಂಸ್ಕøತ ಪದಗಳನ್ನೂ ಸಮಾಸಗಳನ್ನೂ ಅಲ್ಲಲ್ಲಿ ಪ್ರಯೋಗಿಸಿದ್ದಾನೆ, ವ್ಯಾವಹಾರಿಕ ಪದಗಳಂತೂ ಹೇರಳವಾಗಿವೆ. ಗುತ್ತಿಗೆ, ಸಲಾಂ, ಮುಂತಾದ ಹಿಂದೀ ಶಬ್ದಗಳನ್ನೂ ಈತ ಸ್ವೀಕರಿಸಿರುವುದು ಗಮನಾರ್ಹವಾದ ವಿಷಯ.        

(ಎಸ್.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ